ಭಟ್ಟಾಚಾರ್ಯ, ಬಬಿನಿ
 	1906. ಇಂಗ್ಲಿಷಿನ್ಲಲಿ ಬರೆಯುತ್ತಿರುವ ಭಾರತೀಯ ಲೇಖಕ, ಬಿಹಾರ್ ರಾಜ್ಯದ ಭಾಗಲ್‍ಪುರದಲ್ಲಿ 22-10-1906ರಂದು ಜನಿಸಿದರು. ಬಂಗಾಳಿ ಇವರ ಮಾತೃಭಾಷೆ. ಮೊದಲಿಗೆ ಪಾಟ್ನ ವಿಶ್ವವಿದ್ಯಾಲಯದಲ್ಲಿ, ಅನಂತರ ಲಂಡನ್ ವಿಶ್ವವಿದ್ಯಾಲಯದಲ್ಲಿ ಬಿ.ಎ. ಆನರ್ಸ್ ಹಾಗೂ ಪಿಎಚ್.ಡಿ. ಪದವಿಗಳಿಸಿದರು. ಪತ್ರಿಕೋದ್ಯಮ ಹಾಗೂ ಸಾಹಿತ್ಯ ರಂಗದಲ್ಲಿ ಇವರು ಅನೇಕ ಬಗೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಮೆರಿಕದ ವಾಷಿಂಗ್‍ಟನ್ನಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಪತ್ರಿಕಾ ವರದಿಗಾರರಾಗಿ (1949-50). ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿ (1950-52), ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಟಾಗೂರ್ ಸ್ಮಾರಕ ಗ್ರಂಥಮಾಲೆಯ ಕಾರ್ಯದರ್ಶಿಯಾಗಿ (1959-60) ಸೇವೆ ಸಲ್ಲಿಸಿದ್ದಾರೆ. ಅನಂತರ ಸಂದರ್ಶಕ ಪ್ರಾಧ್ಯಾಪಕರಾಗಿ ಹವಾಯಿ ವಿಶ್ವವಿದ್ಯಾಲಯ (1969-70). ವಾಷಿಂಗ್‍ಟನ್ ವಿಶ್ವವಿದ್ಯಾಲಯಗಳಲ್ಲಿ (1975) ಕೆಲಸ ಮಾಡಿದರು. ಸೋಮೆನಿ ಹಂಗರ್ಸ್ (1948), ಮ್ಯೂಸಿಕ್ ಫಾರ್ ಮೋಹಿನಿ (1952), ಹೀ ಹೂ ರೈಡ್ಸ್ ಎ ಟೈಗರ್ (1964), ಎ ಗಾಡೆಸ್ ನೇಮ್ಡ್ ಗೋಲ್ಡ್ (1960), ಶಾಡೋ ಫ್ರಮ್ ಲಡಖ್ (1966)-ಇವು ಇವರ ಕಾದಂಬರಿಗಳು. ಗಾಂಧಿ ದಿ ರೈಟರ್ (1969) ಎಂಬುದು ಗಾಂಧೀಜಿಯವರ ಜೀವನ ಚರಿತ್ರೆ, ಶಾಡೋ ಫ್ರಮ್ ಲಡಖ್ ಎಂಬ ಕೃತಿಗೆ 1967ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರ ಅನೇಕ ಕೃತಿಗಳು ಭಾರತೀಯ ಹಾಗೂ ಪಾಶ್ಚಾತ್ಯ ಭಾಷೆಗಳಿಗೆ ಅನುವಾದಗೊಂಡು ಪ್ರಸಿದ್ಧವಾಗಿವೆ. ಈಗ ಇವರು ಅಮೆರಿಕದಲ್ಲಿ ನೆಲಸಿದ್ದಾರೆ (1984).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ